ಪಡವಲ -
ಕುಕರ್ಬಿಟೆಸೀ (ಸೌತೆ) ಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ (ಸ್ನೇಕ್ ಗೋರ್ಡ್).  ಟ್ರೈಕೊಸ್ಯಾಂತಸ್ ಕುಕಕುಮರಿನ ಇದರ ವೈಜ್ಞಾನಿಕ ಹೆಸರು.  ಇದು ದಕ್ಷಿಣ ಭಾರತದಲ್ಲಿ ಸರ್ವೇಸಾಮಾನ್ಯವಾಗಿ ಬೆಳೆಯುತ್ತದೆ.  ಭಾರತದ ಎಲ್ಲ ರಾಜ್ಯಗಳಲ್ಲಿಯೂ ಇದರ ಬೇಸಾಯ ಉಂಟು.  ಇತ್ತೀಚೆಗೆ ಉತ್ತರದ ರಾಜ್ಯಗಳಲ್ಲಿ ಮಳೆಗಾಲದ ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತಿದೆ.  ಆಸ್ಟ್ರೇಲಿಯ ಹಾಗೂ ದೂರ ಪ್ರಾಚ್ಯಗಳಲ್ಲಿಯೂ ಇದರ ಬೆಳೆ ಉಂಟು.  ಈಗೀಗ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಸಹ ವಿರಳವಾಗಿ ಇದರ ಬೇಸಾಯವನ್ನು ಕಾಣಬಹುದು.  ಭಾರತದಲ್ಲಿ ಸಾರ್ವತ್ರಿಕವಾಗಿರುವ ಈ ಸಸ್ಯದ ಮೂಲ ಭಾರತವೇ ಆಗಿರಬೇಕೆಂದು ಊಹಿಸಲಾಗಿದೆ. ಇದರಲ್ಲಿ ಕಹಿ ಪಡವಲ ಅಥವಾ ಮೊನಚು ಕುಂಬಳ (ಟ್ರೈಕೊಸ್ಯಾಂತಸ್ ಡಯಾಯ್ಕ) ಎಂಬ ಪ್ರಭೇದವೂ ಉಂಟು.

	ಪಡವಲ ಏಕವಾರ್ಷಿಕ ಬಳ್ಳಿ.  ಇದರ ಬೇರು ಮೊದಲು ಗಡ್ಡೆ ರೂಪವನ್ನು ತಾಳುತ್ತದೆ.  ಆಮೇಲೆ ಭೂಮಿಯ ಮೇಲುಭಾಗದ ಬಳ್ಳಿ ಸತ್ತುಹೋಗುತ್ತದೆ. ಸ್ವಲ್ಪಕಾಲದ ಮೇಲೆ ಭೂಮಿಯೊಳಗೆ ಇರುವ ಗಡ್ಡೆಯಿಂದ ಮೊಳಕೆ ಬಂದು ಮೊದಲಿನಂತೆ ಬಳ್ಳಿ ಬೆಳೆಯುತ್ತದೆ.  ಪಡವಲದ ಕಾಂಡ ತೆಳು ಹಾಗೂ ಪೊಳ್ಳು.  ಗೆಣ್ಣುಗಳಿಂದ ಕವಲೊಡೆದಿರುವ ನುಲಿಕಾಂಡಗಳು ಬೆಳೆಯುವುವು.  ಎಲೆಗಳ ಸರಳ ; 10-25 ಸೆಂ.ಮೀ. ಉದ್ದ ಇವೆ.  ಇವುಗಳ ಆಕಾರ ಹಸ್ತದಂತೆ.  5 ಸೆಂ.ಮೀ.  ವ್ಯಾಸದವಾಗಿವೆ.  ಇವಕ್ಕೆ ದುರ್ವಾಸನೆಯುಂಟು.  ಪಡವಲದಲ್ಲಿ ಶಾಸ್ತ್ರೀಯವಾಗಿ ಗುರುತಿಸಬಹುದಾದ ತಳಿಗಳೇನೂ ಎಲ್ಲ.  ಕಾಯಿಯ ಬಣ್ಣ, ಉದ್ದ, ಹಾಗೂ ಗಾತ್ರಗಳಿಗೆ ಅನುಗುಣವಾಗಿ ಹಸುರು, ಬಿಳಿ, ಉದ್ದ, ಮೋಟು ಮತ್ತು ದಪ್ಪ, ಸಣ್ಣ ತಳಿಗಳೆಂದು ಗುರುತಿಸುವುದುಂಟು.  ಎರಡು ಮುಖ್ಯ ಬಗೆಗಳೆಂದರೆ ಬಿಳಿಯ ಪಟ್ಟೆಗಳುಳ್ಳ ತಿಳಿಹಸುರು ಕಾಯಿಯದು.  ಪಡವಲ ಕಾಯಿಗಳು 50 ರಿಂದ 100 ಸೆಂ.ಮೀ ಉದ್ದವಿರುತ್ತವೆ.  ಕಾಯಿಗಳನ್ನು ಇನ್ನು ಹಸುರಾಗಿರುವಾಗಲೇ ಕಿತ್ತು ಅಡುಗೆಗೆ ಬಳಸುತ್ತಾರೆ.  ಇದರಲ್ಲಿ ಉತ್ತಮ ಆಹಾರಾಂಶಗಳಿವೆ.  ಪ್ರತಿ ನೂರು ಗ್ರಾಮ್ ಕಾಯಿಯಲ್ಲಿ ನೀರು 94.6 ಗ್ರಾಮ್, ಪ್ರೋಟೀನು 0.5 ಗ್ರಾಮ್ ; ಮೇದಸ್ಸು 0.3 ಗ್ರಾಮ್.  ಖನಿಜ 0.5 ಗ್ರಾಮ್, ನಾರು 0.8 ಗ್ರಾಮ್ ಮತ್ತು ಶರ್ಕರಪಿಷ್ಟ 3.3 ಗ್ರಾಮ ಇವೆ.  ಪಡವಲದ ಮಾಗಿದ ಹಣ್ಣು ನಾರಿನಿಂದ ಕೂಡಿದ್ದು ಕಹಿಯಾಗಿರುತ್ತದೆ.  ಇದರ ಬೀಜಗಳು ಗಾಢ ಕಂದುಬಣ್ಣದವಾಗಿದ್ದು 1 ರಿಂದ 1.5 ಸೆಂ.ಮೀ. ಉದ್ದ ಇವೆ.  ಸಾಮಾನ್ಯವಾಗಿ ಈ ಬಳ್ಳಿಗಳನ್ನು ಚಪ್ಪರ ಹಾಕಿ ಹಬ್ಬಿಸುತ್ತಾರೆ.  ಕಾಯಿಗಳು ನೇರವಾಗಿ ಉದ್ದವಾಗಿ ಬೆಳೆಯಲೆಂದು ಕೆಲವು ಸಲ ಎಳೆಯ ಕಾಯಿಗಳ ತುದಿಗೆ ಭಾರವಾದ ವಸ್ತುಗಳನ್ನು ಕಟ್ಟುವುದುಂಟು.  ಪಡವಲದ ಸಸ್ಯ ಬೀಜ ನೆಟ್ಟ 7 ರಿಂದ 10 ದಿನಗಳೊಳಗೆ ಮೊಳಕೆಯೊಡೆಯುತ್ತದೆ.  ಕಾಯಿಯಿಂದ ಅದೇ ತಾನೇ ತೆಗೆದ ಬೀಜಗಳನ್ನು ಒಣಗಿಸಿ ಸಗಣಿಯಲ್ಲಿ ಹಾಕಿಟ್ಟರೆ ಶೀಘ್ರವಾಗಿ ಸೊಗಸಾಗಿ ಮೊಳೆಯುತ್ತವೆ.  ವೇಗವಾಗಿ ಬೆಳೆಯುವ ಈ ಸಸ್ಯ 7 ರಿಂದ 8 ವಾರಗಳಲ್ಲಿ ಫಸಲು ಬಿಟ್ಟು ಕುಯ್ಲಿಗೆ ಸಿದ್ಧವಾಗುತ್ತದೆ.  ಕುಯ್ಲು 6 ವಾರಗಳವರೆಗೆ ಆಗುತ್ತದೆ.  ಹೆಕ್ಟೇರಿಗೆ ಸರಾಸರಿ ಇಳುವರಿ ಸುಮಾರು 100 ಕ್ವಿಂಟಾಲ್. ಒಂದು ಸಸ್ಯ 2-3 ಫಸಲು ನೀಡುತ್ತದೆ.

	ಕಹಿಪಡವಲ ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಬೇಸಗೆಯ ಪ್ರಮುಖ ವಾನೀಜ್ಯ ಬೆಳೆಯೆನಿಸಿದೆ.  ಇದು ದ್ವಿಲಿಂಗ ಸಸ್ಯ, ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಮೂಡುತ್ತವೆ.  ಕಾಯಿಗಳು ಪುಟ್ಟದಾಗಿ ಗುಂಡಗಿರುತ್ತವೆ.  ಇವುಗಳ ಬಣ್ಣ ತಿಳಿಹಸುರಿನಿಂದ ಗಾಢ ಹಸುರು ಬಣ್ಣದವರೆಗೂ ವ್ಯತ್ಯಾಸವಾಗುತ್ತದೆ.  ಕಾಯಿಗಳ ಮೇಲೆ ಪಟ್ಟೆಗಳಿರುವುದಿಲ್ಲ.  ಈ ಸಸ್ಯಕ್ಕೆ ಆದ್ರ್ರ ಉಷ್ಣ ಹವೆ ಬೇಕು.  ಒಂದೇ ಸ್ಥಳದಲ್ಲಿ ಅನೇಕ ವರ್ಷ ಬಿಟ್ಟರೆ ಗಿಡದ ಮೇಲುಭಾಗ ಚಳಿಗಾಲದಲ್ಲಿ ಸಾಯುತ್ತದೆ.  ಬೇರುಗಳು ಸುಪ್ತವಾಗಿ ಜೀವಂತವಿದ್ದು ವಸಂತದಲ್ಲಿ ಮತ್ತೆ ಚಿಗುರುತ್ತವೆ.

	ಪಡವಲದ ಎಳೆಯ ಕಾಯಿಗಳನ್ನು ತರಕಾರಿಯಾಗಿ ಹುಳಿ, ಪಲ್ಯಗಳಲ್ಲಿ ಬಳಸುತ್ತಾರೆ.  ಬೀಜ ಮತ್ತು ಬೇರನ್ನು ನಾಟೀ ಔಷಧಿಗಳ ತಯಾರಿಕೆಗೆ ಉಪಯೋಗಿಸುತ್ತಾರೆ.  ಸುಲಭವಾಗಿ ಜೀರ್ಣವಾಗುವ ಕಹಿಪಡವಲ ಮಲ ಮತ್ತು ಮೂತ್ರ ಬದ್ಧತೆಗೆ ಹಾಗೂ ರಕ್ತ ಪರಿಚಲನಾ ರೋಗಿಗಳಿಗೆ ಸಿದ್ಧೌಷಧಿ.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ